ಜಟಾವರ್ಮ ಕುಲಶೇಖರ ಪಾಂಡ್ಯ
	1190-1216. ಮಧುರೆಯ ಪಾಂಡ್ಯವಂಶದ ದೊರೆ. ಬಹುಶಃ ವಿಕ್ರಮ ಪಾಂಡ್ಯನ (1182-90) ಮಗ. ಚೋಳರಾಜ 3ನೆಯ ಕುಲೋತ್ತುಂಗನ ನೆರವಿನಿಂದ ವಿಕ್ರಮ ಪಾಂಡ್ಯ ಪಟ್ಟಕ್ಕೆ ಬಂದಿದ್ದ. ಆದರೆ ಜಟಾವರ್ಮ ಚೋಳರ ಅಧಿರಾಜತ್ವವನ್ನು ಧಿಕ್ಕರಿಸಿ ಬಂಡೆದ್ದು ಬಹುಪಾಲು ಯಶಸ್ವಿಯಾದ. ಈತನ ಕಾಲದಿಂದ ಪಾಂಡ್ಯರು ಸ್ವತಂತ್ರರಾಗ ತೊಡಗಿದರೆಂಬುದು ಇತಿಹಾಸಕಾರರ ಹೇಳಿಕೆ. ರಾಜಗಂಭೀರ ಎಂಬ ಬಿರುದು ಪಡೆದ ಈತ ಮಧುರೆ, ರಾಮನಾಡು, ತಿನ್ನವೆಲ್ಲಿ ಪ್ರದೇಶಗಳ ಮೇಲೆ ಸ್ವಾಮ್ಯ ಪಡೆದಿದ್ದ. ತಿರುವಾಂಕೂರು ಪ್ರದೇಶವೂ ಇವನಿಗೆ ಅಧೀನವಾಗಿತ್ತು. ಇವನ ಅನಂತರ ಇವನ ಸೋದರ ಮಾರವರ್ಮ 1ನೆಯ ಸುಂದರ ಪಾಂಡ್ಯ (1216-38) ಪಟ್ಟವೇರಿದ.	
(ಎಸ್.ಎನ್.ಕೆಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ